ತಥ್ಯಪರಾಮರ್ಶೆ

	ಜ್ಞಾನಮೀಮಾಂಸೆಯಲ್ಲಿ ಸತ್ಯಾಸತ್ಯ ವಿಮರ್ಶೆ ಮಾಡುವ ಕ್ರಮ, ಶಾಸ್ತ್ರಭಾಗ (ಡೈಯಲೆಕ್ಟಿಕ್ಸ್). ಪೂರ್ವ ಮತ್ತು ಪಶ್ಚಿಮ ದೇಶಗಳ ದರ್ಶನಶಾಸ್ತ್ರಗಳೆರಡರಲ್ಲೂ ಈ ವಿಚಾರ ಮೂಲಭೂತವಾಗಿದೆ. ಸಾಕ್ರೆಟೀಸನ ಪ್ರಮುಖವಾದ ಉದ್ದೇಶ ತಥ್ಯಪರಾಮರ್ಶೆಯೇ ಆಗಿತ್ತು. ಈತ ಪ್ರಚಲಿತ ಅಭಿಪ್ರಾಯಗಳನ್ನು ಒಂದು ವಿಶೇಷ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸುತ್ತಿದ್ದ. ನ್ಯಾಯ, ಧರ್ಮ, ಸತ್ಯ, ಸೌಂದರ್ಯಗಳ ವಿಷಯದಲ್ಲಿ ಇರುವ ಕಲ್ಪನೆಗಳನ್ನು ಅವುಗಳಿಂದ ಬರುವ ವಿರೋಧಗಳನ್ನು ಪ್ರದರ್ಶಿಸಿ, ಪ್ರದರ್ಶಿಸಿ, ಕ್ರಮೇಣ ಅದನ್ನು ಪರಿಷ್ಕಾರಕ್ಕೆ ಒಳಪಡಿಸಿ, ಕೊನೆಗೆ ಆ ಎಲ್ಲಾ ವಿಮರ್ಶೆಯನ್ನೂ ಸಮರ್ಪಕವಾದ ನಿರ್ಣಯಾತ್ಮಕ ಲಕ್ಷಣಕ್ಕೆ ತರುತ್ತಿದ್ದ. ಈ ರೀತಿ ವಿರೋಧ ಪರಿಶೀಲನೆಯ ಮೂಲಕ, ಅವಿರುದ್ಧವೂ ಪೂರ್ಣವೂ ಆದ ತತ್ತ್ವಾವಿಷ್ಕಾರಕ್ಕೆ ತತ್ತ್ವಶಾಸ್ತ್ರದಲ್ಲಿ ಹಿಂದಿನಿಂದಲೂ ಪ್ರಾಮುಖ್ಯ ಬಂದಿದೆ. ಪ್ಲೇಟೋನ ಮಹತ್ವವುಳ್ಳ ಬರವಣಿಗೆಗಳಲ್ಲಿ ಈ ಮಾರ್ಗಕ್ಕೆ ವಿಶೇಷವಾದ ಪುರಸ್ಕಾರವಿರುವುದಲ್ಲದೇ, ಪರಮಾರ್ಥವನ್ನು ಮುಟ್ಟಲು ಇದೇ ಸಮೀಚೀನ ಮಾರ್ಗವೆಂದು ವಾದಿಸಲಾಗಿದೆ.

	ಈ ಮಾರ್ಗ ಪುನಃ ಪಾಶ್ಚಾತ್ಯ ದರ್ಶನದಲ್ಲಿ ಪ್ರಾಧಾನ್ಯ ಪಡೆಯುವುದು, ಕಾಂಟನ ವಿಮರ್ಶೆಗಳಲ್ಲಿ. ಅವನ ಪ್ರಕಾರ, ಮಾನವ ಬುದ್ಧಿ ಇಂದ್ರಿಯಾತೀತವಾದ ವಸ್ತುವನ್ನು ಗ್ರಹಿಸಲಾರದು. ಅದರ ವಿಷಯದಲ್ಲಿ ಅದು ಕಲ್ಪಿಸುವ ಸಿದ್ಧಾಂತಗಳೆಲ್ಲ ಅನಿವಾರ್ಯವಾಗಿ ಅಂತಸ್ಸಂಘರ್ಷಣೆಗೆ ಒಳಗಾಗುತ್ತವೆ. ಈ ಸಂಘರ್ಷಣೆ ತಾರ್ಕಿಕ ಬುದ್ಧಿಯ ಪರಿಮಿತಿಯನ್ನು ಸ್ಥಾಪಿಸುತ್ತದೆ. ಇಂಥ ವಿರೋಧ ಪ್ರದರ್ಶನದಿಂದ ತಥ್ಯವೆಂದು ಭಾವಿಸಿರುವ ಅಭಿಪ್ರಾಯಗಳ ನಿರಾಧಾರತೆಯನ್ನು ಸಾಧಿಸುವ ಪದ್ಧತಿಯನ್ನು ಡೈಯಲೆಕ್ಟಿಕ್ಸ್ ಎಂದು ವ್ಯವಹರಿಸುವ ಸಂಪ್ರದಾಯವನ್ನು ಆತ ಪ್ರಚಾರಕ್ಕೆ ತಂದ. ಪ್ಲೇಟೋನಲ್ಲಿ ಇದು ಸತ್ಯಸಾಧನೆಗೆ ವಿಧಿರೂಪವಾದ ಮಾರ್ಗವಾಗಿದ್ದರೆ, ಕಾಂಟನಲ್ಲಿ ಆ ತಥ್ಯಗಳ ಅನಾವರಣದ ತಂತ್ರವಾಗಿ ನಿಷೇದಾತ್ಮಕವಾಗುತ್ತದೆ. ಮುಂದೆ ಹೇಗಲ್ಲನಲ್ಲಿ ಇದು ಪುನಃ ವಿಧಿರೂಪವಾಗಿ ಸತ್ಯದ ಅನ್ವೇಷಣೆಗೆ ಏಕೈಕ ಪಂಥವೆಂದು ಇದು ಪರಿಗಣಿತವಾಗುತ್ತದೆ. ನಮ್ಮ ಬುದ್ಧಿ ಒಂದು ಸಂಕುಚಿತವಾದ ಸತ್ಯವನ್ನು ಪೂರ್ಣ ಸತ್ಯವೆಂದು ತಿಳಿಯುವ ಸಾಮಾನ್ಯ ಪೂರ್ವಾಗ್ರಹಕ್ಕೆ ಒಳಗಾಗುತ್ತದೆ. ಕ್ರಮೇಣ ಅದನ್ನು ಪರಿಕ್ಷಾರಕ್ಕೆ ಒಳಪಡಿಸಿದರೆ ತೀರ ಮಾರ್ಪಾಡಾಗಿ ಮೊದಲಿನ ಕಲ್ಪನೆ, ಅತ್ಯಂತ ವಿರುದ್ಧವಾದ ಕಲ್ಪನೆಯಲ್ಲಿ ಪರ್ಯವಸಾನವಾಗುತ್ತದೆ. ಹೀಗೆ ಪ್ರತಿಜ್ಞೆ (ತೀಸಸ್) ಮತ್ತು ಪ್ರತಿಪ್ರತಿಜ್ಞೆ (ಆ್ಯಂಟಿತೀಸಸ್) ಸಿಲುಕಿಕೊಂಡು, ವ್ಯಾಹತಿಯಲ್ಲಿ ಶಿಕ್ಷೆ ಹೊಂದಿದ ಬುದ್ಧಿ- ಇವುಗಳ ಪರಸ್ಪರ ಸಮ್ಮಿಳನದಲ್ಲಿ ಇವುಗಳೆರಡಕ್ಕಿಂತ ಸಮಗ್ರವಾದ, ಮೇಲಿನ ಸೋಪಾನದ ಸಂಯೋಗ ಅಥವಾ ಸಂಯೋಜನೆಯಲ್ಲಿ (ಸಿಂತಿಸಿಸ್) ವಿಶ್ರಾಂತಿ ಹೊಂದುತ್ತದೆ. ಮುಂದೆ ಆ ಹೊಸ ಕಲ್ಪನೆಯೂ ತನ್ನ ಪ್ರತಿಕಲ್ಪನೆಗೆ ಜನಕವಾಗಿ ಅದರ ಮುಂದಿನ ಇನ್ನೂ ಸಮಗ್ರವೂ ಅತೀತವೂ ಆದ ಸಮನ್ವಯಕ್ಕೆ ಏರುತ್ತದೆ. ಈ ರೀತಿಯ ಏಕದೇಶಜ್ಞಾನ, ವಿರೋಧದ ಅಭಿವ್ಯಕ್ತಿ, ಅವಿರುದ್ಧವಾದ ರೀತಿಯಲ್ಲಿ ಆ ಎರಡು ಏಕದೇಶಾಜ್ಞಾನಗಳ ಸಮನ್ವಯ ಕ್ರಮಕ್ಕೆ ಡೈಯಲೆಕ್ಟಿಕ್ಸ್ ಎಂದು ಹೇಗಲ್ ನಿರ್ದೇಶಿಸಿ, ಇದೊಂದೇ ಸತ್ಯಸಾಧನೆಯ ಮಾರ್ಗವೆಂದು ಸಿದ್ಧಾಂತ ಮಾಡುತ್ತಾನೆ. ಇದರ ಕೊನೆಯ ಘಟ್ಟ ಪೂರ್ಣಸತ್ಯದ ದರ್ಶನ. ಹೇಗಲ್‍ನ ಈ ಕ್ರಮವನ್ನು ಕಾರ್ಲ್ ಮಾಕ್ರ್ಸ್ ಸಮಾಜಗಳ ಬೆಳವಣಿಗೆಯ ನಿರೂಪಣೆಯಲ್ಲಿ ಉಪಯೋಗಿಸಿಕೊಂಡು ತನ್ನ ಘರ್ಷಣಾತ್ಮಕ ಭೌತಿಕವಾದ (ಡೈಯಲೆಕ್ಟಿಕಲ್ ಮಟೀರಿಯಲಿಸಂ) ಎಂಬ ಕ್ರಾಂತಿಕಾರಿ ಸಮಾಜ ಸಿದ್ಧಾಂತವನ್ನು ರಚಿಸುತ್ತಾನೆ. ಭಾರತೀಯ ದರ್ಶನಗಳಲ್ಲಿ ಬೌದ್ಧ ಸಂಪ್ರದಾಯದ ಶೂನ್ಯವಾದ ಆಚಾರ್ಯನಾದ ನಾಗಾರ್ಜುನ, ಆಸ್ತಿಕ ದರ್ಶನಗಳು ಮತ್ತು ಬೌದ್ಧರ ಸರ್ವಾಸ್ತಿವಾದಗಳು ಮುಂದಿಡುವ ನಿತ್ಯಕಲ್ಪನೆಗಳಲ್ಲಿರುವ ಮೂಲಭೂತ ವಿರೋಧಗಳನ್ನು ಪ್ರದರ್ಶಿಸಿ, ತನ್ನ ಸರ್ವಶೂನ್ಯವಾದವನ್ನು ಸ್ಥಾಪಿಸುತ್ತಾನೆ. ಇಲ್ಲಿಯೂ ನಿಷೇಧಾತ್ಮಕವಾದ ತಥ್ಯಪರಾಮರ್ಶೆಯನ್ನು ಕಾಣಬಹುದು. ಆಸ್ತಿಕ ದರ್ಶನಗಳಲ್ಲಿ ಅದ್ವೈತದ ಗೌಡಪಾದಾಚಾರ್ಯರು ಬಾಹ್ಯಜಗತ್ತಿನ ಮಿಥ್ಯಾತ್ವವನ್ನು ಈ ರೀತಿಯ ಖಂಡನದಿಂದ ಸಾಧಿಸುತ್ತಾರೆ. ಕಾರ್ಯಕಾರಣ ಸಂಬಂಧವನ್ನು ಸಾಂಖ್ಯರ ಸತ್ಕಾರ್ಯವಾಗಲೀ ವೈಶೇಷಕರ ಅಸತ್ಕಾರ್ಯವಾಗಲೀ ಸಮಂಜಸವಾಗಿ ನಿರೂಪಿಸಲಾರವು. ಆದುದರಿಂದ ಕಾರ್ಯಕಾರಣಭಾವವೇ ಭ್ರಾಂತಿಯೆಂದು ವಾದಿಸುತ್ತಾರೆ. ಮುಂದಿನ ಅದ್ವೈತ ಗ್ರಂಥಕಾರನಾದ ಶ್ರೀಹರ್ಷ ಜಗತ್ಸ ತ್ಯತ್ವವಾದಿಗಳ ಸಿದ್ಧಾಂತಗಳನ್ನೆಲ್ಲ ರೀತಿಯ ನೀರಂಕುಶ ಖಂಡನೆಗೆ ಒಳಪಡಿಸಿ, ತನ್ನ ಪ್ರಸಿದ್ಧವಾದ ಖಂಡನ ಖಾದ್ಯದಲ್ಲಿ ಅದ್ವೈತ ಸಿದ್ಧಾಂತದ ಮೂಲಸತ್ಯದ ಕಲ್ಪನೆಯನ್ನು ಸಮರ್ಥಿಸುತ್ತಾನೆ. ನಾಗಾರ್ಜುನನದು ಸರ್ವತೋಮುಖವಾದ ಖಂಡನೆ. ಗೌಡಪಾದ ಮತ್ತು ಶ್ರೀಹರ್ಷ ಇವರು, ಅದ್ವೈತದ ಬ್ರಹ್ಮ ಒಂದನ್ನು ಬಿಟ್ಟು ಮಿಕ್ಕೆಲ್ಲ ಸತ್ಯಕಲ್ಪನೆಗಳನ್ನೂ ಖಂಡಿಸುತ್ತಾರೆ. ಈ ಎರಡನೆಯ ರೀತಿಯ ಖಂಡನೆ ಅಭಾವದಲ್ಲದೆ, ಭಾವದಲ್ಲಿ ಪರ್ಯಾವಸಾನ ಹೊಂದುತ್ತದೆ. ಎಂದು ವಿಶೇಷವನ್ನು, ಆಧಿಕ್ಯವನ್ನು ಅಭಿಮಾನದಿಂದ ಆರೋಪಿಸಲಾಗಿದೆ. ನಾಗರ್ಜುನನೂ ಅಭಾವದಲ್ಲಿ ಅಭಿನಿವೇಶವುಳ್ಳವನಲ್ಲವೆನ್ನುವುದನ್ನು ಆಧುನಿಕರು ನಿರ್ಣಯಿಸಿದ್ದಾರೆ. ಹಾಗೆಯೇ ಅದ್ವೈತದ ನಿರ್ಗುಣಬ್ರಹ್ಮ ಅಭಾವಕ್ಕಿಂತ ಬೇರೆಯಾಗಿರಲಾರದೆಂದೂ ವಾದಿಸಲಾಗಿದೆ.
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ